ಗೋವೆಯ ಕದಂಬರು ಗೋವೆಯನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಳ್ಳುವುದಕ್ಕೆ ಮುಂಚೆ ಗೋವ ಮತ್ತು ಅದರ ಪರಿಸರಗಳಲ್ಲಿ ಆಳುತ್ತಿದ್ದ ಪ್ರಾಚೀನ ರಾಜಮನೆತನಗಳ ರಾಜಧಾನಿಯಾಗಿದ್ದ ಸ್ಥಳ. ಸಾಲ್ಸೆಟ್ಟಿನಲ್ಲಿರುವ ಈಗಿನ ಚಂದೋರ್ ಎಂಬುದೇ ಚಂದ್ರಪುರವೆಂದು ಭಾವಿಸಲಾಗಿದೆ. ಬೆಳಗಾಂವಿ ಜಿಲ್ಲೆಯ ಚಂದಗಡ್ ಪಟ್ಟಣವೇ ಹಿಂದೆ ಚಂದ್ರಪುರವಾಗಿದ್ದಿರಬಹುದೆಂದೂ ಒಂದು ಊಹೆಯುಂಟು. ಭೋಜವಂಶಕ್ಕೆ ಸೇರಿದ ದೇವರಾಜ ಚಂದ್ರಪುರದಲ್ಲಿದ್ದು, ಗೋಸ್ವಾಮಿ ಮತ್ತು ಇಂದ್ರಸ್ವಾಮಿ ಎಂಬ ಇಬ್ಬರು ಬ್ರಾಹ್ಮಣರಿಗೆ ದತ್ತಿಬಿಟ್ಟನೆಂಬುದು ಸುಮಾರು 4ನೆಯ ಶತಮಾನಕ್ಕೆ ಸೇರಬಹುದಾದ ಷಿರೋಡ ತಾಮ್ರಶಾಸನದಿಂದ ತಿಳಿದುಬರುತ್ತದೆ. ಗೋವೆಯ ಕದಂಬರೂ ಸ್ವಲ್ಪಕಾಲ ಚಂದ್ರಪುರದಿಂದಲೇ ಆಳುತ್ತಿದ್ದರು. ಹೇಮಚಂದ್ರ ತನ್ನ ದ್ವ್ಯಾಶ್ರಯಕಾವ್ಯದಲ್ಲಿ ಈ ನಗರವನ್ನು ಹೆಸರಿಸಿದ್ದಾನೆ. ಇಮ್ಮಡಿ ಶಸ್ತದೇವ ಇಲ್ಲಿ ಆಳುತ್ತಿದ್ದಾಗ ಶಿಲಹಾರರನ್ನು ಸೋಲಿಸಿ ತನ್ನ ರಾಜ್ಯವನ್ನು ವಿಸ್ತರಿಸಿದ. ಇವನ ಮಗ ಒಂದನೆಯ ಜಯಕೇಶಿ 1052ರಲ್ಲಿ ತನ್ನ ರಾಜಧಾನಿ ಯನ್ನು ಚಂದ್ರಪುರದಿಂದ ಗೋವಕಪಟ್ಟಣ ಅಥವಾ ಗೋವಕಪುರಿಗೆ ಬದಲಾಯಿಸಿದ. ಚಂದ್ರಪುರದ ಆ ಕಾಲದ ಅವಶೇಷಗಳು ಬಹುಮಟ್ಟಿಗೆ ನಾಶವಾಗಿವೆ. ಸುಮಾರು 11ನೆಯ ಶತಮಾನಕ್ಕೆ ಸೇರಬಹುದಾದ ಶಿವಲಿಂಗವೊಂದೂ ದೇವಾಲಯದ ಅವಶೇಷಗಳೂ ಅಲ್ಲಿ ಕಂಡುಬಂದಿವೆ. 	(ಎ.ವಿ.ವಿ.; ಎಂ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ